ಎಳೆಗೂಸಿನ ಈಲಿಯ ಅರಿಶಿನಾರಿಗೆ: ಭಾರತದಲ್ಲಿ, ಮುಖ್ಯವಾಗಿ ದಕ್ಷಿಣ ನಾಡುಗಳಲ್ಲಿ ಎಳೆಗೂಸುಗಳಿಗೆ ಆಗಾಗ್ಗೆ ಜ್ವರ ಬಂದೋ ಉಚ್ಚಾಟವಾಗೋ, ಗೊತ್ತಾದ ಕಾರಣವಿಲ್ಲದೆ ಈಲಿ ನಿಧಾನವಾಗಿ ಕೆಡುತ್ತ ದೊಡ್ಡದಾಗಿ ನಾರಿನಂತಾಗಿ ಹೊಟ್ಟೆ ಉಬ್ಬರಿಸಿಕೊಂಡು, ಕೆಲವೇಳೆ ಕಾಮಾಲೆಯಾಗಿ, ಬಹಳ ಕೂಸುಗಳಲ್ಲಿ ಕೊನೆಗೆ ಮಾರಕ ವಾಗುವ ಬೇರೂರುವ ರೋಗ. ಈ ರೋಗವನ್ನು ಮೊಟ್ಟಮೊದಲು ವಿವರಿಸಿದಾತ ಸೆನ್ (1887). ಈಲಿಯಲ್ಲಿನ ಜೀವಕಣಗಳ ಅನುವಳಿಕೆಯಾಗಿ (ಡೀಜನರೇಷನ್) ಮತ್ತೆ ಬೆಳೆದು ನಾರಿನಂತಾಗಿ ಅದರ ರಚನೆಯೇ ಹಾಳಾಗುವುದಕ್ಕೆ ಅರಿಶಿನಾರಿಗೆ (ಸಿರ್ರೋಸಿಸ್) ಎಂದಿದೆ.

 ಕಾರಣಗಳು 
ಒಂದರಿಂದ ಮೂರನೆಯ ವರ್ಷಗಳಲ್ಲಿ ಬಡವ ಬಲ್ಲಿದ, ಗಂಡು ಹೆಣ್ಣು ಎಂಬ ವ್ಯತ್ಯಾಸಗಳಿಲ್ಲದೆ, ಕೆಲವು ತಲೆಮಾರುಗಳಲ್ಲಿ ಈ ರೋಗ ಬರುವಂತೆ ತೋರುವುದು. ಕಾರಣ ಸರಿಯಾಗಿ ತಿಳಿದಿಲ್ಲ. ಎಳೆಗೂಸಿನ ಉಣಿಸು, ಜೀವವಸ್ತು ಕರಣದ (ಮೆಟಬಾಲಿಕ್) ಅಂಶ, ಜಠರದಲ್ಲಿ ಹುಟ್ಟಿ ಈಲಿಯನ್ನು ಕೆಡಿಸುವ ಕೆರಳಿಕ ಅಂಶ, ತಾಯ ಆಹಾರದಿಂದ ಹುಟ್ಟಿ ಬಸುರಲ್ಲೂ ಆಮೇಲೆ ಹಾಲೂಡಿಸುವಾಗಲೂ ಎಳೆಗೂಸಿಗೆ ಸಾಗುವ ವಿಷಕರ ಅಂಶ ಇವುಗಳಲ್ಲಿ ಯಾವುದಾದರೂ ಕಾರಕ ಆಗಿರಬಹುದೆಂಬ ಶಂಕೆಯಿದೆ. ಆದರೆ, ಉಣಿಸಿನಲ್ಲಿ ಆ ತೆರನ ಕೆಡುಕಿನ ವಸ್ತು ಇಲ್ಲಿನ ತನಕ ಯಾವುದೂ ಸಿಕ್ಕಿಲ್ಲ. ತೀರ ಬಡತನದಲ್ಲಿ ಬೆಳೆವ ಎಳೆಗೂಸಿನಲ್ಲಿ ಉಣಿಸು ಕೊರೆಯಾಗಿ ಕ್ವಾಷಿಯಾರ್ಕರ್ ರೋಗ ಬಂದು ಈಲಿ ದೊಡ್ಡದಾಗುವುದಾದರೂ ಆ ಮಕ್ಕಳಲ್ಲಿ ಈ ಅರಿಶಿನಾರಿಗೆ ಕಂಡುಬರದು. ಇನ್ನೂ ಹೆಚ್ಚಿನದಾಗಿ, ಯಾವುದೊ ಸೋಂಕು ಕಾರಕವನ್ನೆಲು ಬಲವಾದ ಅನುಮಾನಗಳೂ ಇವೆ. ಆಗಾಗ್ಗೆ ಜ್ವರ, ಉಚ್ಚಾಟ, ಉಸಿರ್ನಾಳ ಪುಫ್ಪುಸಗಳ ಬೇನೆಗಳ ಕಾಟ; ಜ್ವರ ಬಂದಾಗ ಬಿಳಿರಕ್ತ ಕಣಗಳ ಹೆಚ್ಚಳ; ಹೆತ್ತವಳ ಮಾಸಿನ ಮೂಲಕ ಸಾಗಿಬರುವ ಒಂದು ವಿಷಕಣದಿಂದ (ವೈರಸ್) ಈಲಿಯುರಿತವಾಗುವುದು (ಹೆಪಟೈಟಿಸ್)-ಹೀಗಾದಾಗ ಅರಿಶಿನಾರಿಗೆ ಕಂಡುಬಂದಿದೆ. ಅರಿಶಿನಾರಿಗೆ ಆಗಿರುವ ಎಳೆಗೂಸುಗಳ ಮಲದಲ್ಲಿ ಸೋಸಿಹೋಗುವ ಕಾರಕಗಳನ್ನು ಬಿಳಿ ಇಲಿಗಳಿಗೆ ಚುಚ್ಚಿದಾಗ ಅವಕ್ಕೆ ಅರಿಶಿನಾರಿಗೆ ಆಗಲು ಹಲವಾರು ಕಾರಕಗಳೇ ಇರಬಹುದಾದರೂ ಅವುಗಳ ನಿಜವಾದ ಪಾತ್ರ, ಒಂದರೊಡನೊಂದರ ಸಂಬಂಧ ಇವಾವುದೂ ಇನ್ನೂ ಖಚಿತವಾಗಿ ತಿಳಿದಿಲ್ಲ. ವಿಷಕಣದಿಂದ ಹತ್ತುವ ಸೋಂಕು, ತಲೆಮೊರೆ ಗುಣ, ಜೀವಿವಿಷಗಳು ಮುಖ್ಯ ಎನ್ನಬಹುದು.
 ರೋಗ ಪ್ರಭಾವ 
ರೋಗದ ಎಳಸಿನಲ್ಲಿ, ಈಲಿಯ ಜೀವಕಣಗಳಿಗೆ ಅಷ್ಟಿಷ್ಟು ಹಾನಿಯಾಗಿರುತ್ತದೆ. ಹಾನಿಗೊಂಡ ಜೀವಕಣಗಳು ಅಲ್ಲಲ್ಲೇ ಗುಂಪುಗಟ್ಟಿರಬಹುದು. ಇಲ್ಲವೇ ಈಲಿಯಲ್ಲಿ ಎಲ್ಲೆಲ್ಲೂ ಇರಬಹುದು. ಯಾವ ಹಂತದಲ್ಲೇ ಆಗಲಿ ಕೊಬ್ಬಿನ ಜೀವಕಣಗಳು ಕಂಡುಬಾರವು. ಈಲಿಯ ವಿಶೇಷ ಜೀವಕಣಗಳ ಬದಲಾಗಿ ಸಾಮಾನ್ಯವಾದವು ಅಲ್ಲಲ್ಲಿ ನುಗ್ಗಿ ಪಸರಿಸಿರುತ್ತವೆ. ಅನುವಳಿದು (ಡಿಜನರೇಟೆಡ್) ಹಾಳಾದ ಜೀವಕಣಗಳ ಜಾಗದಲ್ಲಿ ನಾರಿನಂತಿರುವ ತಂತುಕ (ಫೈಬ್ರಸ್) ಊತಕ ಸೇರಿಕೊಳ್ಳುತ್ತದೆ. ಇದು ಹುಸಿ ಕಿರಿಹಾಲೆ (ಲಾಬ್ಯೂಲ್) ತೆರನಾಗಿರುತ್ತದೆ. ಇವುಗಳ ನಡುವೆ ಸಿಕ್ಕಿಕೊಂಡ ಈಲಿಯ ಜೀವಕಣಗಳು ಸೊಟ್ಟಾಪಟ್ಟೆ ಆಗುತ್ತವೆ. ಧಮನಿಗಳಿಗೆ (ಆರ್ಟರೀಸ್) ಆತಂಕ ವಾಗದು. ತೂರುಗೊಂದಿಯ ಸಿರಗಳಲ್ಲಿ (ಪೋರ್ಟಲ್ ವೆಯ್ನ್‌ಸ್) ಒತ್ತಡವೇರುವುದರಿಂದ ಅನ್ನನಾಳದ ಕೆಳಕೊನೆಯಲ್ಲಿ ಸಿರಗಳು ಊದಿಕೊಂಡು ಬಿರಿದಾಗ ರಕ್ತವಾಂತಿ ಆಗಬಹುದು. ಹಾಗೆ ಹೊಕ್ಕುಳ ಸುತ್ತ ಹೊಟ್ಟೆ ಮೇಲೆ ಸಿರಗಳು ಊದಿಕೊಂಡು ತಿರಿಗಟ್ಟುತ್ತವೆ.
 ಲಕ್ಷಣಗಳು  
ಈ ರೋಗ ಎಂದಿನಿಂದ ತಲೆದೋರಿತೆಂದು ಹೇಳಲಾಗದಷ್ಟು ಒಳಗೊಳಗೇ ಬಲಿಯುತ್ತ ಬರುವುದು. ಸಾಮಾನ್ಯವಾಗಿ ಹೆತ್ತವರು ಚೆನ್ನಾಗಿ ನೋಡಿಕೊಳ್ಳುತ್ತಿರುವ ಎಳೆಗೂಸಿಗೆ ಸಣ್ಣಜ್ವರ ಬಂದು ಇಳಿಯುತ್ತದೆ. ಆದರೆ, ಭೇದಿ, ಕೆಮ್ಮು, ಜ್ವರಗಳೊಂದಿಗೆ ಕೂಸು ಮತ್ತೆ ಮತ್ತೆ ಹಾಸಿಗೆ ಹಿಡಿಯುತ್ತದೆ. ಮೇಲಿಂದ ಮೇಲೆ ಹೀಗಾಗುತ್ತ ಬಂದಂತೆಲ್ಲ ಕೂಸು ಸಣಕಲಾಗುತ್ತ ಹೊಟ್ಟೆ ದಪ್ಪವಾಗಿ, ಲವಲವಿಕೆ ಕುಂದುತ್ತ, ಹಸಿವಿಲ್ಲದೆ ರಚ್ಚೆ ಹಿಡಿವುದನ್ನು ತಾಯಿ ಗುರುತಿಸಿ ವೈದ್ಯರಿಗೆ ತೋರಿಸುವ ಹೊತ್ತಿಗೆ ಬಲಗಡೆ ಪಕ್ಕೆಲುಬಿನ ಕೆಳಗೆ ಒಂದೆರಡು ಅಂಗುಲಗಳಷ್ಟು ಬೆಳೆದು ಈಲಿ ದೊಡ್ಡದಾಗಿರವುದು. ಇದರೊಂದಿಗೇ ತೊರಳೆ (ಪ್ಲೀಹ) ಕೂಡ ಊದಿರಬಹುದು.

ಕೆಲವೇ ವಾರಗಳಲ್ಲಿ ಎಳೆಗೂಸಿನ ಆರೋಗ್ಯ ತೀರ ಕೆಟ್ಟು, ಆಗಾಗ್ಗೆ ಜ್ವರ ಕಾಣಿಸಿಕೊಂಡು ಹೊಟ್ಟೆಯಲ್ಲಿ ತುಸು ನೀರ್ಗೂಡಿ, ಈಲಿ ತೊರಳೆಗಳು ಮತ್ತೂ ಗಡುಸಾಗಿ ನಾರಾಗುತ್ತವೆ. ಈಲಿಯಲ್ಲಿ ರಕ್ತ ಹರಿವಿಗೆ ತಡೆಯಾಗುವುದರಿಂದ ಹೊಟ್ಟೆಯ ಮೇಲೆ ಹೊಕ್ಕುಳಸುತ್ತ ಸಿರಗಳು ಹಿಗ್ಗಿ, ಮೈಚರ್ಮ, ಕಣ್ಣು ಕೊಂಚ ಹಳದಿಬಣ್ಣಕ್ಕೆ ತಿರುಗಬಹುದು. ಮಲ ಬಿಳಿಚಿಕೊಂಡು ಉಚ್ಚೆ ಹಳದಿಯಾಗುವುದು ರಕ್ತಕೊರೆಯಾಗಿ (ಅನೀಮಿಯ), ಬಿಳಿರಕ್ತಕಣಕೊರೆಯಾಗಿ ರಕ್ತದಲ್ಲಿನ ಚಪ್ಪಟಿಕಗಳ (ಪ್ಲೇಟೆಲೆಟ್ಸ್‌) ಕೊರತೆಯಿಂದ ಚರ್ಮದಡಿ ರಕ್ತ ಜಿನುಗಿ ನೀಲಿ ಕಲೆಗಳೇಳುತ್ತವೆ.
ಕೊನೆಯ ಹಂತವಾಗಿ, ಹೊಟ್ಟೆಯಲ್ಲಿ ವಿಪರೀತ ನೀರ್ದುಂಬಿಕೊಂಡು, ಹೊಕ್ಕುಳು ಹೊರಮಗುಚಿಕೊಂಡು ಕೈ, ಕಾಲು ಮೊಗಗಳ ಉಬ್ಬರವಾಗಿ, ಈಲಿ ಒರಟೊರಟಾಗಿ ಕುಗ್ಗಿ ಬಲುಗಡುಸೂ ನಾರೂ ಆಗಿ, ತೊರಳೆಯೂ ಇನ್ನಷ್ಟು ದೊಡ್ಡದಾಗುವುದು. ಉಬ್ಬಸ, ಅರವೆ (ಅಜೀರ್ಣ), ಆಗಾಗ್ಗೆ ರಕ್ತವಾಂತಿ ಆಗುತ್ತ, ಈಲಿಯ ಮಯಕವಾಗಿ (ಹೆಪ್ಯಾಟಿಕ್ ಕೋಮ) ನಿಧಾನವಾಗಿ ಒಂದು ದಿನ ಕೂಸು ಅಸು ನೀಗುವುದು.

 ಚಿಕಿತ್ಸೆ 
ತೀರ ಎಳಸಿನಲ್ಲೇ ರೋಗವನ್ನು ಕಂಡುಕೊಂಡರೆ, ವಾಸಿಯಾಗಬಹುದು. ಈಲಿ ದೊಡ್ಡದಾಗಿರುವುದನ್ನು ಗುರುತಿಸಿದರೆ ಮಾತ್ರ ಇದು ಸಾಧ್ಯ. ಈಲಿಯಲ್ಲಿ ಒಂದು ಸಣ್ಣ ತೂತುಸೂಜಿಯನ್ನು ತೂರಿಸಿ ಈಲಿಯ ಬಲು ಸೂಕ್ಷ್ಮ ಚೂರನ್ನು ಮಾದರಿಯಾಗಿ ಹೊರತೆಗೆದು ತಪಾಸುಮಾಡಿ ರೋಗವನ್ನು ಖಚಿತಪಡಿಸಲೂಬಹುದು. ನಿಜವಾದ ಕಾರಣವೇ ಗೊತ್ತಿಲ್ಲವಾದ್ದರಿಂದ, ಬಲಿತ ರೋಗಕ್ಕೆ ಮದ್ದುಗಳೇ ಇಲ್ಲ. ಆದರೆ, ಎಳೆಗೂಸಿಗೆ ಸಾಕಷ್ಟು ಶಮನ ಕೊಡಲು ಕೆಲವು ಕ್ರಮಗಳನ್ನೂ ಕೈಗೊಳ್ಳಬಹುದು. ಕೂಸು ಆದಷ್ಟೂ ಹಾಯಾಗಿ ಮಲಗಿರಬೇಕು. ಉಣಿಸಿನಲ್ಲಿ ಪಥ್ಯವಿಲ್ಲವಾದರೂ ಪ್ರೋಟೀನುಗಳನ್ನು ಹೆಚ್ಚಾಗಿ ನೀಡಬೇಕು. ಜೀವಾತುಗಳು ಸಾಕಷ್ಟಿರಬೇಕು. ಉಪ್ಪು, ಕೊಬ್ಬು ಕಡಿಮೆ ಮಾಡಬೇಕು.

ಸೋಂಕುಗಳು ತಲೆದೋರಿದರೆ ಜೀವಿವಿರೋಧಕಗಳನ್ನು (ಆಂಟಿಬಂiೆÆಟಿಕ್ಸ್‌) ಕೊಡಬೇಕು. ಉಚ್ಚಾಟ ಆಗುತ್ತಿದ್ದರೆ. ಮದ್ದುಗಳಿಂದ ತಡೆಯಬಹುದು. ಹೊಟ್ಟೆ ಉಬ್ಬರ ಬಲುಹೆಚ್ಚಿ ಏರುಸಿರು ಉಬ್ಬಸವಾಗಿದ್ದರೆ ಹೊಟ್ಟೆಯಲ್ಲಿ ನೀರು ಕೂಡಿಕೊಂಡಂತೆಲ್ಲ ತೂತುಸೂಜಿ ಹಾಕಿ ತೆಗೆದುಹಾಕಬೇಕು (ನೋಡಿ- ಈಲಿ; ಪಿತ್ತಕೋಶ;- ಪಿತ್ತನಾಳಗಳು).							   (ಪಿ.ಸಿ.ಬಿ.; ಎ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ